Wednesday, 16 April 2008

ಬದುಕು - ಬವಣೆ

ಹುಟ್ಟು ಸಾವುಗಳ ಮಧ್ಯೆ
ಏನೆಲ್ಲಾ ನೋಡುವೆವು
ನೋವು ನಲಿವು, ಅಸಹನೆ
ಅನ್ಯಾಯ, ಅಕ್ರಮ ವಂಚನೆ

ಅದೆಷ್ಟೋ ಸಹಿಸಲಾಗದ ಮುಖಗಳು
ಅವುಗಳೊಂದಿಗಿನ ಪ್ರತಿ ಕ್ಷಣಗಳು
ಕೆಲವೊಮ್ಮೆ ನಾವು ನಗಲಾರದೆ
ಕಳೆದುಬಿಡುತ್ತೇವೆ ವಾರ ತಿಂಗಳುಗಳು

ಬೆಳೆದಂತೆ ಜವಾಬ್ದಾರಿ, ಹೆಚ್ಚುವ ಆತಂಕಗಳು
ಪ್ರತಿದಿನವೂ ಹೊಸತು, ಹೊಸ ಸಂಬಂದಗಳು
ಎಲ್ಲವನ್ನೂ ನಿಭಾಯಿಸಬೇಕು, ನಿಲ್ಲದೆ ಮುಂದೆ ಸಾಗಬೇಕು

ಎಲ್ಲವೂ ಬೇಕು, ಸುಖಿಸಬೇಕು
ದುಡಿದೋ, ದುಡಿಯದೆಯೋ ಗಳಿಸಬೇಕು
ಬೇರೊಬ್ಬರ ತುಳಿದು, ತಲೆಯೆತ್ತಿ,
ಎದೆಯುಬ್ಬಿಸಿ ನಾವು ಬೀಗಬೇಕು.

ನಾನು ನನ್ನದೆನ್ನುವುದು ಅದೆಷ್ಟೋ
ಇನ್ನಿಲದಂತೆ ಕಿತ್ತಾಡಿ, ಗಳಿಸಿ ಕೂಡಿಟ್ಟಿದ್ದೇನೊ
ಹೀಗೊಮ್ಮೆ ಯೋಚಿಸಿದರೆ ಶೂನ್ಯ
ಮನದಲ್ಲಿ ಇಣುಕಿ ಕುಟುಕುವುದೊಂದೇ ಪ್ರಶ್ನೆ
ಏನಿದು ಜೀವನ, ಯಾತಕೀ ಬವಣೆ?

-- ಅರುಣ ಸಿರಿಗೆರೆ

ಗುಂಗು

ನಾ ನಿನ್ನನ್ನೇ
ಓಲೈಸುತ್ತೇನೆ ಸಖಿ
ನಿನ್ನೊಲವಿನ ಹಂಗಿನಿಂದಲ್ಲ
ನನ್ನಲ್ಲಿ ನೀ ಮೂಡಿಸಿದ
ಭಾವಗಳ ಗುಂಗಿನಿಂದ

-- ಅರುಣ ಸಿರಿಗೆರೆ

ಕಲ್ಪನೆಯ ಹುಡುಗಿ

ನನ್ನ ಕಲ್ಪನೆಯ ಹುಡುಗಿ,
ಆಭರಣಗಳ ಹಂಗಿಲ್ಲದವಳು
ನಿರಾಭರಣೆಯೇನಲ್ಲ!
ತುಂಟನಗೆ, ಮಿಂಚನೋಟ ತೊಟ್ಟವಳು
ನನ್ನ ಕಲ್ಪನೆಯ ಹುಡುಗಿ,

ನನ್ನ ಕಲ್ಪನೆಯ ಹುಡುಗಿ
ಹಮ್ಮುಬಿಮ್ಮುಗಳ ಸೋಂಕಿಲ್ಲದವಳು
ಮುಗ್ಧ ಬೆಡಗಿಯೇನಲ್ಲ!
ಒನಪು ವೈಯ್ಯಾರಗಳ ಉಟ್ಟವಳು

ನನ್ನ ಕಲ್ಪನೆಯ ಹುಡುಗಿ
ಜೀನ್ಸ್ ಸ್ಕರ್ಟ್, ನೈಟಿಗಳೆಂದರೆ
ಮೂಗ ಮುರಿವವಳು
ನನ್ನ ಕಣ್ಣ ನೋಟಗಳು ನೇಯ್ದ
ಸೀರೆಗೆ ತಾನೆ ನೂಲಾದವಳು

ನನ್ನ ಕಲ್ಪನೆಯ ಹುಡುಗಿ
ಮಾತಿನಿಂದ ಅಣತಿ ದೂರ
ಮೌನ ದೇವತೆಯೇನಲ್ಲ
ಮಾತು ಬೆಳ್ಳಿ ಮೌನ ಬಂಗಾರ
ಎಂದರಿತವಳು.

ನನ್ನ ಕಲ್ಪನೆಯ ಹುಡುಗಿ
ಶೃಂಗಾರವೆನಲು ಕೆಂಪಗಾಗುವಳು
ಸಿಟ್ಟಿನಿಂದೇನಲ್ಲ
ಅವಳ ತಿಳಿನೀರ ಲಜ್ಜೆಯದು

ನನ್ನ ಕಲ್ಪನೆಯ ಹುಡುಗಿ
ಬರಿ ಕಲ್ಪನೆಯಲ್ಲೆ ಕನಸಾದವಳಲ್ಲ
ಕನಸುಗಳ ನನಸಾಗಿಸದಿದ್ದರೂ
ನನ್ನ ಭಾವನೆಗಳ ಬುತ್ತಿಯಾದವಳು

-- ಅರುಣ ಸಿರಿಗೆರೆ

ಹುಲ್ಲು ಹೊತ್ತ ಮಹಿಳೆ!!!

ಬೆರಳ ತೋರಿದರೆ
ಹಸ್ತವನ್ನೇ ನುಂಗುವೆ,
ಅರಳುವ ಕಮಲವ
ಚಿವುಟಿ ಬಿಸಾಡುವೆ
ನೀನಲ್ಲ ಅಂತಿಥ ಮಹಿಳೆ
ನೀ ತುಂಬ ಚಾಣಾಕ್ಷಳೆ
ಎಷ್ಟಾದರೂ ನೀನಲ್ಲವೆ....
ಹುಲ್ಲು ಹೊತ್ತ ಮಹಿಳೆ.

-- ಅರುಣ ಸಿರಿಗೆರೆ

ಅವ್ವನಿಗಾಗಿ

ನಾ ಮೆಚ್ಚಿ ಬರೆವ ಈ ಕವನ
ನನ್ನವ್ವನಿಗೆ ಮುಡಿಪು
ತನ್ನೆದೆಯನುಣಿಸಿ ಎನಗೆ
ಆಕೆ ತುಂಬಿಕೊಟ್ಟ ಭಾವನೆಗಳಲಿ ಮಿಂದೊಮ್ಮೆ
ನಾ ಕವನವಾಗುವಾಸೆ ಅವಳಿಗಾಗಿ
ಅವಳು ನನಗೆ ಕೊಟ್ಟ ಪ್ರೀತಿಗಾಗಿ

ನನ್ನಳುವು ಕಿವಿಗಪ್ಪಳಿಸಲು
ಓಡಿಬಂದು ನನ್ನನೆತ್ತಿ
ತನ್ನೆದೆಗಪ್ಪಿ ಮುತ್ತನಿಟ್ಟವಳು
ಜೋಗುಳವ ಪೊರೆದು
ನನ್ನ ಪವಡಿಸಿದವಳು
ನಾ ಕವನವಾಗುವಾಸೆ ಅವಳಿಗಾಗಿ
ನನ್ನಮ್ಮ ನನಗಿಟ್ಟ ಮುತ್ತಿಗಾಗಿ

ನನ್ನ ನಗುವಿನಲಿ
ತಾನು ನಕ್ಕು, ನೋವ ಮರೆತವಳು
ನಾನಾಡದೆ ಹೇಳಿದ ಮಾತುಗಳ
ತಪ್ಪದೆ ಅರ್ಥೈಸಿದ ಏಕಳು
ನನಗಾಗಿ ತನ್ನ ಸುಖಗಳನು ತೊರೆದು
ನನ್ನ ಜೀವನವಾದವಳು
ನಾ ಕವನವಾಗುವಾಸೆ, ಅವಳಿಗಾಗಿ
ಅವಳು ಕೊಟ್ಟ ಈ ಜೀವಕ್ಕಾಗಿ

ಇಂದು ನಾನಿಲ್ಲಿ ದೂರ ತೀರದಲಿ
ಬೆಳೆದಿಹೆನು ನಾನೀಗ
ದುಡಿಯವೆನು ನಾ
ಜವಾಬ್ದಾರಿಗಳು ನನ್ನೆಗಲಲ್ಲಿ
ನೆನಪಾಗುವಳು ನನ್ನವ್ವ
ನಾ ಕವನವಾಗುವಾಸೆ ಅವಳಿಗಾಗಿ
ಅವಳು ಕೊಟ್ಟ ಈ ಬಾಳಿಗಾಗಿ

ನೆನಪಾದಾಗಲೆಲ್ಲ ನನ್ನವ್ವ
ಮನದ ತುಂಬ ದುಗುಡ
ತುಂಬಿ ಬರುವ ಕಣ್ಣುಗಳು
ಕಳೆದುಕೊಂಡಿಹೆನು ನಾನು ಏನೆಲ್ಲವ
ಕೈ ತುತ್ತು, ಸಿಹಿಮುತ್ತು ಮತ್ತವಳ ಒಡಲು
ಓಡಿ ಅವಳ ಮಡಿಲ ಸೇರುವ ತವಕ
ಮಡಿಲಲ್ಲಿ ಮುಖವಿಟ್ಟು ಪವಡಿಸುವಾಸೆ
ಮನಬಿಚ್ಚಿ ನನ್ನ ಕನಸುಗಳ ಹೇಳುವಾಸೆ
ಹೀಗೆ ಇನ್ನದೆಷ್ಟೋ ಆಸೆಗಳು
ಹೇಳಲಾಗದ ಆ ಆಸೆಗಳಿಗೆ ಭಾವನೆಗಳಿಟ್ಟವಳು ನೀನು
ನಾ ಕವನವಾಗುವಾಸೆ ನಿನಗಾಗಿ ನನ್ನವ್ವ
ನನ್ನಲ್ಲಿ ನೀ ತುಂಬಿದ ಈ ಭಾವಗಳಿಗಾಗಿ

-- ಅರುಣ ಸಿರಿಗೆರೆ

ಹೃದಯವೀಣೆ


ನೀ ಮೀಟಿದಾಗಲೆ ನಾನರಿತದ್ದು
ನನ್ನದೊಂದು ಮಿಡಿವ ಹೃದಯವೆಂದು
ಅದ್ಯಾವ ರಾಗವ ನುಡಿಸಿದೆಯೋ ನೀನಂದು
ನನ್ನೆದೆಯ ಸ್ವರಗಳಿಗೆ ಶೃತಿ ಪಲ್ಲವಿಗಳಾಗಿಹೆ ನೀನಿಂದು

ಅದೆಷ್ಟೋ ಕೈಗಳು ನುಡಿಸಲೆತ್ನಿಸಿದ ಹೃದಯವೀಣೆಯಿದು
ಯಾವ ಕೈಗಳೂ ನುಡಿಸಲಿಲ್ಲ ನೀ ನುಡಿಸಿದ ರಾಗವನೆಂದೂ
ನೀ ಮೀಟಿದ ತಂತಿಗಳು ಕಂಪಿಸಿರಲು ಇಂಪಿನಲಿ
ನಾ ಕಳೆದು ಹೋಗಿಹೆ ನಿನ್ನ ರಾಗಗಳದೇ ಗುಂಗಿನಲಿ

ನನಗೀಗ ಬೇರೆ ರಾಗಗಳ ಅರಿವೇ ಇಲ್ಲ
ನೀ ಮೂಡಿಸುವ ರಾಗಗಳ ಪರಿವೇ ಎಲ್ಲ
ನುಡಿಸುತಿರು ರಾಗಗಳ ನೀ ಹೀಗೆ ಎಡೆಬಿಡದೆ
ಚುಂಬಿಸಲಿ ಅವು ನನ್ನೆದೆಯ ಹಾಗೆಯೆ ಕ್ಷಣ ಬಿಡದೆ
ನೀ ನುಡಿಸುವ ರಾಗವದಾವುದೇ ಆಗಿರಲಿ
ನನ್ನೆದೆಯ ತಂತಿಗಳು ಹರಿಯದೆ ಉಳಿದಿರಲಿ

- - ಅರುಣ ಸಿರಿಗೆರೆ

ಹೀಗೇಕೆ ನೀ ಮಾಡಿದೆ?


ಹೀಗೇಕೆ ನೀ ಮಾಡಿದೆ
ಬರುವೆನೆಂದು ಬಾರದೆ
ನನ್ನ ಕಾಯಿಸಿದೆ
ಸೋನೆ ಮಳೆಗೆ ನೆನೆದು ನಲುಗಿದ್ದೆ
ನೀ ಮಳೆಯಾಗಿ ಬಂದೆಯೆಂದೇ ನಾ ಭಾವಿಸಿದ್ದೆ.

ಹೀಗೇಕೆ ನೀ ಮಾಡಿದೆ
ನನ್ನ ಕಡೆಗೆ ಬೆನ್ನು ಮಾಡಿ
ನನ್ನ ಪ್ರೀತಿಯ ತೊರೆದೆ
ನನ್ನೆದೆಯ ಮುಟ್ಟಿ, ಭಾವ ತಟ್ಟಿ
ನನ್ನಾಸೆ ಕನಸುಗಳ ಸುಟ್ಟೆ

ಹೀಗೇಕೆ ನೀ ಮಾಡಿದೆ
ಅಂದು ನಾನೇನೂ ಹೇಳದೆ
ನೀನೆ ಎಲ್ಲವ ಅರ್ಥೈಸುತಲಿದ್ದೆ
ಇಂದು ನಾ ಕೂಗುತಲಿದ್ದರೂ
ಕೇಳದೆ ನೀ ಕಿವುಡಳಾದೆ

ಹೀಗೇಕೆ ನೀ ಮಾಡಿದೆ
ಅಂದು ನಾ ಬೇಡವೆಂದರೂ
ನನ್ನಲ್ಲಿ ಒಲವನ್ನು ತಂದೆ
ಇಂದು ನನ್ನೆದೆಯ ಭಾವನೆಗಳ
ಬಡಿದು ಕೊಚ್ಚಿ ಕೊಂದೆ

ಹೀಗೇಕೆ ನೀ ಮಾಡಿದೆ
ಎಂದು ನಾ ಕೇಳುತಲಿದ್ದರೂ
ನೀ ಸುಮ್ಮನೆ ನಡೆದು ಹೋದೆ
ಹೋಗುವುದಾದರೆ ಹೋಗು
ತಿರುಗಿ ನನ್ನೆದೆಗೆ ಬಾರದಿರು
ಈಗ ನಿನ್ನಲ್ಲಿ ಒಲವಿಲ್ಲ, ನನ್ನಲ್ಲಿ ಭಾವವಿಲ್ಲ
ನೀ ಹೋಗಿಬಿಡು ನನಗೆ ಅಜ್ನಾತವಾಗಿ ಬಿಡು

-- ಅರುಣ ಸಿರಿಗೆರೆ

ನಾ ನಿನ್ನ


ನಾ ನಿನ್ನ ತಡೆಯುವುದರೊಳಗಾಗಿ
ನನ್ನೆದೆಯಲ್ಲಿ ಹೆಜ್ಜೆಯೂರಿದೆ
ಏಕೆಂದು ನಾ ಕೇಳುವುದರೊಳಗೆ
ಕಾಣದೆ ನೀ ಮಾಯವಾದೆ
ಗುರುತುಗಳ ಅಳಿಸಲಾಗದೆ
ನಾ ನಿನ್ನ ಹುಡುಕುತ್ತಿದ್ದೆ
ಆದರೆ ನೀ ಕಣ್ತಪ್ಪಿಸಿ
ನನ್ನ ಭಾವಗಳಲ್ಲಿ ಬೆರೆತಿದ್ದೆ...

-- ಅರುಣ ಸಿರಿಗೆರೆ

ಬಾ ನಲ್ಲೆ....!!


ಬಾ ನನ್ನ ನಲ್ಲೆ...
ಬಂದು ನನ್ನ ಮನದಲ್ಲಿ ನಿಲ್ಲೆ,
ತುಸು ಹೊತ್ತು ಮಾತ್ರ ನಿಲ್ಲೆ.
ಆದರೆ ನಿಂತ ನೀರಾಗಬೇಡ ಇಲ್ಲೆ
ಏಕೆಂದರೆ ಬರಲಿರುವಳು
ನನ್ನ ಮುಂದಿನ ನಲ್ಲೆ...!!!!!


-- ಅರುಣ ಸಿರಿಗೆರೆ

ನಾನು


ನಾನು ನನ್ನದೆನ್ನುವುದೆಲ್ಲಾ ಸುಳ್ಳು
ಬರೀ ನಾನೇ ಆದಾಗ ಜೀವನವೆಲ್ಲಾ ಮುಳ್ಳು
ನಾನು ನಾವಾಗಲಿ, ನನ್ನದು ನಮ್ಮದಾಗಲಿ
ನಮ್ಮೆಲ್ಲರ ಬಾಳು ಹಸನಾಗಲಿ....

-- ಆರುಣ ಸಿರಿಗೆರೆ

ನನ್ನ ಭಾವ


ನಾ ಕವಿಯಲ್ಲ, ಕವನಗಳ ಬರೆಯುವುದಿಲ್ಲ,
ನನ್ನ ಭಾವನೆಗಳಿಗೆ ಕೇವಲ ಪದಗಳಾಗಿರುವೆ

ನಾ ಹಾಡುಗಾರನಲ್ಲ, ನಾ ಹಾಡುವುದಿಲ್ಲ
ನನ್ನ ಭಾವನೆಗಳಿಗೆ ನಾ ಸ್ವರಗಳಾಗಿರುವೆ.

ನಾ ಜೀವಿಯಲ್ಲ, ನಾ ಜೀವಿಸುತ್ತಿಲ್ಲ,
ಆದರೆ ನನ್ನ ಭಾವನೆಗಳಿಗೆ ನಾ ಜೀವವಾಗಿರುವೆ.


-- ಅರುಣ ಸಿರಿಗೆರೆ

ಹುಬ್ಬಳ್ಳಿಯಾಕೆ


ಎಲ್ಲರಂಥವಳಲ್ಲ ಈಕೆ
ನನ್ನ ಕಂಡು ಮುಸಿಮುಸಿ ನಗುವಳು ಯಾಕೆ?
ನಾ ಕೇಳಿದೆ; ಅಲ್ಲ ನೀ ಹೀಗೇಕೆ, ಆದರೆ
ಮತ್ತೊಮ್ಮೆ ನಗು ಚೆಲ್ಲಿದಳು ಈ ಹುಬ್ಬಳ್ಳಿಯಾಕೆ

ಇವಳ ಕಿಲಕಿಲ ನಗು ಮನಕೆ ಕಚಗುಳಿ
ಇವಳ ಕುಲುಕು ನಡೆ ಮೈಗೆ ಛಳಿ ಛಳಿ.
ಇವಳು ನಡೆದಲ್ಲೆಲ್ಲಾ ಸಂಪಿಗೆಯ ಘಮಘಮ
ಎಲ್ಲೂ ಇಲ್ಲ ಈ ವೈಯ್ಯಾರಕ್ಕೆ ಸರಿಸಮ.

ಹೇಳಬೇಕೆಂದುಕೊಂಡೆ ನಾನವಳಿಗೆ ಎಲ್ಲವನು,
ಮರೆತೆನೆಲ್ಲ ನೋಡುತ ಅವಳ ಅಂದವನು
ಅಯ್ಯೋ ಬಿದ್ದೆನೆ ಇವಳ ಹಳ್ಳಕೆ,
ಏಳಲಿಲ್ಲ ಮತ್ತೆ ನಾ ಮೇಲಕೆ.
ನೀವ್ಯಾರಾದರೂ ಬಿದ್ದೀರಿ ಜೋಕೆ. ಏಕೆಂದರೆ,
ಎಲ್ಲರಂಥವಳಲ್ಲ ಈ ಹುಬ್ಬಳ್ಳಿಯಾಕೆ.

-- ಅರುಣ ಸಿರಿಗೆರೆ

ಸ್ನೇಹ - ಹಣತೆ

ಕಳೆದು ಹೋಗುತಿದೆ ಮನವು
ಕಾಣದ ಕೈಗಳ ಸ್ವಾರ್ಥದಲಿ
ಕಳೆದುಕೊಳ್ಳದಿರು ನಿನ್ನತನವ
ಪರರ ಆಸೆಗಳ ಸಾರ್ಥಕತೆಯಲಿ.


ಭ್ರಮಿಸಿ ನಿರಾಶೆಗೊಳ್ಳುವಿಯೇಕೆ?
ತೊಡೆದು ಹಾಕು, ಕವಿದ ಮೋಡಗಳು
ಮಳೆ ಸುರಿಸಬಹುದೆಂಬ ಬಯಕೆ,
ಏಕೆಂದರೆ, ಚದುರುವುದು ಮೋಡಗಳು
ಬೀಸುವ ಗಾಳಿಯ ರಭಸಕೆ.

ಕತ್ತಲೇ ಜಗವೆಂದು ತಿಳಿದ ಮನಕೆ
ಬೆಳಕಾಗಿ ಮೂಡಿತ್ತು, ಸ್ನೇಹದ ಹಣತೆ.
ಹಬ್ಬಿತ್ತು ಮನದಲ್ಲಿ ಸಾಂತ್ವಾನದ ಅಲೆ.
ಬೀಸಿತೊಮ್ಮೆ ಗಾಳಿ, ನಂದಿ ಹೋಯಿತು ಹಣತೆ,
ಹರೆಡಿತು ಮತ್ತೆ ಎಲ್ಲೆಲ್ಲೂ ಕತ್ತಲೆ.

- - ಅರುಣ ಸಿರಿಗೆರೆ

ತುಡಿತ


ಅಕ್ಕ, ನೆನಪಿದೆಯೇ ನಮ್ಮ ಬಾಲ್ಯದ ದಿನಗಳು?
ಇಬ್ಬರೂ ಒಟ್ಟಿಗೆ ಆಡುತ್ತಾ, ಬೀಳುತ್ತಾ, ಜಗಳವಾಡಿದ ಕ್ಷಣಗಳು.
ಆ ದಿನಗಳ ಮಧುರತೆ, ಸಂತೋಷ ಇಂದು ದೊರಕೀತೆ?
ಮರಳಿ ಹೋಗೋಣವೆ, ಆ ಗತಿಸಿದ ದಿನಗಳ ಬಳಿಗೆ
ಕಿತ್ತು ತರೋಣವೆ ನಮ್ಮೆಲ್ಲಾ ಹರುಷವನ್ನು...

ಅಕ್ಕ, ನೆನಪಿದೆಯಾ, ನಾವಿಬ್ಬರು ಅಪ್ಪನಿಂದ ಒದೆ ತಿಂದದ್ದು,
ನೀನು ಒಮ್ಮೆ ಹೊಸ ಬಟ್ಟೆಗಾಗಿ ಮತ್ತೊಮ್ಮೆ ಲೆಕ್ಕ ಮಾಡದಿದ್ದಕ್ಕಾಗಿ
ನಾನು ಚಾಕೋಲೇಟಿಗಾಗಿ, ಕ್ರಿಕೆಟ್ ಗಾಗಿ......... ಎಲ್ಲವೂ ಬೇಕೆಂದು
ಒದೆ ತಿಂದರೂ, ಆ ದಿನಗಳ ಸಂತೋಷ ಮರಳಿ ದೊರಕೀತೆ?

ಅದು ಹಾಗೆಯೇ ಕಾಲದ ಮಹತ್ವ, ಅದರ ಅರಿವು
ನಮಗಾಗುವುದು ಅದು ಗತಿಸಿದ ಮೇಲೆಯೆ..
ಕಳೆದು ಹೋಗುವ ಮೊದಲು ಇಂದಿನ ದಿನವು
ಈ ದಿನದ ಸಂತೋಷವನ್ನೆಲ್ಲಾ ಹೀರಿಬಿಡೋಣ


-- ಅರುಣ ಸಿರಿಗೆರೆ

ಸ್ನೇಹ ನಿನಾದ


ಹರಿವ ನೀರ ಕಲರವದಂತೆ ನಿನ್ನ ಸ್ನೇಹ ಗೆಳತಿ
ಕೇಳಲು ಇಂಪು ಅದು ಸೂಸುವ ನಿನಾದ.
ಬಿದಿಗೆ ಚಂದ್ರಮನಂತೆ ನಿನ್ನ ಸ್ನೇಹ ಗೆಳತಿ
ನೋಡಲು ಕಣ್ಣಿಗೆ ತಂಪು, ಮನಸಿಗೆ ಆನಂದ.
ಸಂಜೆಗಂಪಲ್ಲಿ ಭೋರ್ಗರೆವ ಕಡಲಂತೆ ನಿನ್ನ ಸ್ನೇಹ ಗೆಳತಿ
ಹೊಮ್ಮುತಿವೆ ಭಾವನೆಗಳು ಏನನ್ನೋ ಹೇಳುವಂತೆ.

ಹೇಳು ಗೆಳತಿ, ಹೇಗಿರಬೇಕು ನಮ್ಮ ಸ್ನೇಹ?
ಹುಣ್ಣಿಮೆಯಂದು, ಪೂರ್ಣ ಚಂದ್ರ ಚೆಲ್ಲುವ ಬೆಳದಿಂಗಳಿನಂತಿರಲೆ?
ಬಗೆ ಬಗೆಯ ಹೂಗಳ ಮುಡಿದು ನಗೆ ಚೆಲ್ಲುವ ಹೂತೋಟದಂತಿರಲೆ?
ಏನನ್ನೂ ಹೇಳದೆ, ಎಲ್ಲವನ್ನೂ ಸೂಚಿಸುವ ಕನ್ನಡಿಯಂತಿರಲೆ?

ಬಿಸಿಲಿನ ಕೋಪಕ್ಕೆ ಬೇಸತ್ತು ನೊಂದ ಭೂತಾಯಿಗೆ,
ತಂಪು, ಕಂಪು ತರುವ ವರ್ಷಧಾರೆಯಾಗಲಿ.
ಬಿರುಗಾಳಿಯ ರಭಸಕ್ಕೆ ನಲುಗಿದರೂ,
ತನ್ನಂತರಾಳದಲ್ಲಿ ಪ್ರಶಾಂತವಾಗಿರುವ ಸಾಗರದಂತಿರಲಿ.
ಒಂಭತ್ತು ತಿಂಗಳು ಹೊತ್ತು, ಹಡೆವ ತಾಯಿಯು
ಸುರಿಸುವ ಆನಂದಭಾಷ್ಪವಾಗಲಿ.
ಕೇಳು ಗೆಳತಿ ಹೀಗಿರಲಿ ನಮ್ಮ ಸ್ನೇಹ.

-- ಅರುಣ ಸಿರಿಗೆರೆ

ಪ್ರೇಮ ಭಾವ


ನನ್ನ ಮನದಾಳದ ಭಾವನೆಗಳ
ಕೆದಕಿದ ಚೆಲುವೆ,
ಹೀಗೇಕೆ ನನ್ನನು
ಕನಸಿನಲಿ ಕಾಡಿ ಕೊಲುವೆ?

ನನ್ನ ಪ್ರೀತಿಗೆ ನೀನೇಕೆ ಅಂಧಳಾಗಿರುವೆ?
ನಿನ್ನ ಮನದಿಂದ ಏಕೆ ನನ್ನ ದೂರ ಮಾಡಿರುವೆ?
ನಿನ್ನ ಪ್ರೀತಿಯೊಂದನ್ನೇ ನಾ ಬಯಸುವೆ
ಆದರೆ ಹೀಗೇಕೆ ನೀ ನನ್ನ ಕಾಡಿ ಕೊಲ್ಲುವೆ?

ಬೇರೆಯ ಲೋಕದಲ್ಲಿ ವಿಹರಿಸುತ್ತಿದ್ದ ನನ್ನ
ಏಕೆ ಮಾಡಿಕೊಂಡೆ ಗುಲಾಮನಾಗಿ ನಿನ್ನ,
ಅರ್ಥವಿರದ ಭಾವನೆಗಳಿಗೆ ನೀಡಿದೆ ನೀ ಮೆರುಗು
ದೂರ ಮಾಡಿದೆ ನಾ ಅನಾಥನೆಂಬ ಕೊರಗು.

ನೋಡಿದಾಗ ನಿನ್ನ ಬೆಳದಿಂಗಳ ಮುಗುಳ್ನಗೆ
ಅಮಿತಾನಂದ ನನ್ನ ಮನದೊಳಗೆ
ನಿನ್ನ ಪ್ರೀತಿಯ ಆರಾಧಕ ನಾನು,
ದೂರ ಮಾಡದಿರು ನನ್ನ ನೀನು.

-- ಅರುಣ ಸಿರಿಗೆರೆ