Wednesday 28 April, 2010

ಮೈ ಆಟೋಗ್ರಾಫ್


ಇಂದಾದರೂ ನನ್ನಲ್ಲಿರುವ ಅವಳ ಭಾವನೆಗಳಿಗೆ ಪದಗಳಾಗಬೇಕೆಂದು ನಿರ್ಧರಿಸಿ ಹೊರಟು ನಿಂತೆ. ಇದೇ ಕಡೆಯ ಅವಕಾಶ ಎಂದೆನಿಸಿತು. ಇಂದು ಪರೀಕ್ಷೆಯ ಕೊನೆಯ ದಿನ. ಅಷ್ಟು ವರ್ಷಗಳು ಒಂದೇ ತರಗತಿಯಲ್ಲಿದ್ದರೂ ಎಂದೂ ತುಟಿಬಿಚ್ಚಿ ಮಾತನಾಡಿರಲಿಲ್ಲ. ಆದರೆ ಕಣ್ಣುಗಳು ಅವಕಾಶ ಸಿಕ್ಕಾಗಲೆಲ್ಲ ಮಾತನಾಡಿಕೊಂಡಿದ್ದವು.

ಮರೆಯದೆ ಆಟೋಗ್ರಾಫ್ ಎತ್ತಿಕೊಂಡು ಸುಮಾರು ಮೂರು ತಿಂಗಳಿನಿಂದ ಖಾಲಿ ಇದ್ದ ಆ ಪುಟವನ್ನೊಮ್ಮೆ ದಿಟ್ಟಿಸಿದೆ, ಅವಳಿಗಾಗಿಯೇ ಮೀಸಲಿಟ್ಟ ಆ ಪುಟ, ಹಾಗೆ ಖಾಲಿಯಾಗಿಯೇ ಇತ್ತು. ಇಂದು ಅದನ್ನು ತುಂಬಿಸಿ ನನ್ನ ಮನವನ್ನೂ ತುಂಬಿಸಿಕೊಳ್ಳಬೇಕೆಂಬ ತವಕದಿಂದ ಕಾಲೇಜ್ ಕಡೆ ಹೆಜ್ಜೆ ಹಾಕಿದೆ.

ಕಾಲೇಜಿನಲ್ಲಿ ಎಲ್ಲರೂ ಪರೀಕ್ಷೆಗಾಗಿ ತಯಾರಿ ನಡೆಸಿದ್ದರೆ , ನಾನು ನನ್ನ ಆಟೋಗ್ರಾಫ್-ನ ಆ ಖಾಲಿ ಪುಟವನ್ನೇ ಭಾವುಕನಾಗಿ ನೋಡುತ್ತಾ ನಿಂತಿದ್ದೆ. ಅವಳಿಗೆ ಏನನ್ನು ಹೇಳಬೇಕು, ನನ್ನ ಭಾವಗಳಿಗೆ ಹೇಗೆ ಗೀತೆಯಾಗಬೇಕು ಎನ್ನುವುದಷ್ಟೇ ನನ್ನ ಮನಸಿನಲ್ಲಿತ್ತು, ಪರೀಕ್ಷೆ ಮರೆತು ಹೋಗಿತ್ತು. ಸೈರನ್ ಕೂಗು ಪರೀಕ್ಷೆಗೆ ಸಮಯವೆಂದು ನನ್ನ ಎಚ್ಚರಿಸಿತು.

ಹೇಗೋ ಕೊಸರಾಡಿ ಆ ಮೂರು ಗಂಟೆಗಳನ್ನು ಕಳೆದು, "ಪಾಸಾಗುವನೆಲ್ಲ!! ಅಷ್ಟೇ ಸಾಕು" ಎಂದು ನಿಟ್ಟುಸಿರು ಬಿಟ್ಟು ಪರೀಕ್ಷಾ ಕೊಠಡಿಯಿಂದ ಓಡೋಡಿ ಹೊರಬಂದೆ. ನನ್ನ ಕಣ್ಣುಗಳಿಗೆ ಬಿಡುವಿಲ್ಲದ ಕೆಲಸ. ಅವಳು ಯಾವ ಮೂಲೆಯಲ್ಲಿ ನಿಂತಿರುವಳೋ ಎಂದು ಹುಡುಕುತ್ತಲೇ ಇವೆ. ಹುಡುಕಾಟ ಸರಿಸುಮಾರು ಅರ್ಧಗಂಟೆ ಸಾಗಿತು. ಅಷ್ಟರಲ್ಲಾಗಲೇ ಗೆಳೆಯರೆಲ್ಲಾ ನನ್ನ ಸುತ್ತುವರೆದಿದ್ದರು. ಆ ಪ್ರಶ್ನೆಗೆ ಏನು ಉತ್ತರ? ಈ ಪ್ರಶ್ನೆಗೆ ಏನು? ಅದು ಸರಿ, ಇದು ತಪ್ಪು ಎಂಬ ತರ್ಕಗಳು ಸಾಗುತ್ತಿದ್ದರೆ ನನ್ನ ಕಣ್ಣುಗಳು ಅವಳ ಹುಡುಕಾಟದಲ್ಲಿದ್ದವು.

"ಅಗೋ ಅಲ್ಲಿ, ಅವಳ ಗೆಳತಿಯರೊಂದಿಗೆ" ಎಂದು ಎಚ್ಚರಿಸಿದವು ನನ್ನ ಕಣ್ಣುಗಳು. ತುಟಿಗಳು ತಾವಾಗಿ ಅರಳಿದವು. ಒಂದು ಬಗೆಯ ಉತ್ಸಾಹ. ಇನ್ನೇನು ಖಾಲಿಪುಟ ಮತ್ತು ಮನಸನ್ನು ತುಂಬಿಸಿಕೊಳ್ಳುವ ಸಮಯ ಬಂದೇಬಿಟ್ಟಿತು ಎಂದು ಮನಸ್ಸು ಕುಣಿಯಲಾರಂಭಿಸಿತು. ಹೇಗೋ ಗೆಳೆಯರ ಕಣ್ಣು ತಪ್ಪಿಸಿ ಅವಳೆಡೆಗೆ ಹೆಜ್ಜೆ ಹಾಕಿದೆ.

"ಹೇ ಪ್ರಶಾಂತ್!" ಹಿಂದಿನಿಂದ  ಯಾವುದೋ ದನಿ ನನ್ನ ತಡೆಯಿತು. ಮನದಲ್ಲೇ ಶಪಿಸಿ ಹಿಂತಿರುಗಿದೆ. ನನ್ನ ಆತ್ಮೀಯ ಗೆಳೆಯನೊಬ್ಬ ನಗುತ್ತಾ ನಿಂತಿದ್ದ. "ನಾಳೆ ನೀನು ಊರಿಗೆ ಹೋಗ್ತಾ ಇದಿಯ ಅಲ್ವ, ಅದಕ್ಕೆ ಅಮ್ಮ ನಿನ್ನ ಮನೆಗೆ ಕರೆದುಕೊಂದು ಬಾ ಅಂದಿದ್ದಾಳೆ. ನಡೆ ಹೋಗೋಣ" ಎಂದ. "ಇಲ್ಲ ಕಣೋ, ಸ್ವಲ್ಪ ಕೆಲಸ ಇದೆ, ಸಂಜೆ ಬರ್‍ತೀನಿ" ಎಂದು ತಡವರಿಸಿದೆ. "ಓಹೋ! ಅವಳನ್ನ ಮಾತನಾಡಿಸಬೇಕ? ಸರಿ, ಇಲ್ಲೆ ಕಾಯ್ತಾ ಇರ್‍ತೀನಿ, ನೀನು ಮುಗಿಸಿ ಬಾ" ಎಂದು ಅಲ್ಲೆ ಇದ್ದ ಕಲ್ಲು ಬೆಂಚಿಗೆ ಒರಗಿದ. ಅವನ ಕಡೆ ನಸುನಕ್ಕು, ತಿರುಗಿ ಅವಳತ್ತ ಕಣ್ಣು ಹಾಯಿಸಿದೆ. "ಅರೆ! ಕಣ್ಣುಗಳು ಮಂಜಾಗುತ್ತಿವೆಯೇ?" ಸ್ವಲ್ಪ ಹೊತ್ತಿನ ಕೆಳಗೆ ಇದ್ದವಳು ಈಗ ಅಲ್ಲಿಲ್ಲ. ಕೆಲಕ್ಷಣ ದಂಗಾಗಿ ನಿಂತೆ. ಬೇರೆ ಕಡೆ  ಇರಬಹುದೆಂದು ಕಣ್ಣುಗಳು ಹರಿದಾಡಲು ಆರಂಭಿಸಿದವು.

"ಅಗೋ ಅಲ್ಲಿ, ಕಾಲೇಜ್ ಗೇಟಿನ ಬಳಿ" ನೋಡು ನೋಡುತ್ತಿದ್ದಂತೆ ಅವಳ ಅಣ್ಣನ ಜೊತೆ ಬೈಕಿನಲ್ಲಿ ಕಣ್ಮರೆಯಾದಳು. ಮನಸ್ಸು ಅಲ್ಲೇ ಕುಸಿದು ಕೂತಿತ್ತು. ಕಡೆಯ ಅವಕಾಶ ಕೈಚೆಲ್ಲಿ  ಹೋಗಿತ್ತು.

ಇಲ್ಲಿಗೆ ಎಂಟು ವರ್ಷಗಳು ಕಳೆದವು. ಇಂಥಹದೊಂದು ಘಟನೆ ನನ್ನ ಮನಸಿನಲ್ಲಿ ಉಳಿಯುತ್ತದೆಂದು ಎಣಿಸಿರಲಿಲ್ಲ. ನನ್ನ ಕಾಲೇಜ್ ದಿನಗಳನ್ನು ಮೆಲುಕು ಹಾಕಲು ನನ್ನ ಆಟೋಗ್ರಾಫ್ ತೆಗೆದಾಗಲೆಲ್ಲ ಆ ಖಾಲಿ ಪುಟದ ಬಳಿ ನಿಂತು ಭಾವುಕನಾಗಿ ನೋಡುತ್ತಾ ಕೂತುಬಿಡುತ್ತೇನೆ. ಮೇಲಿನ ಘಟನೆ ಹಾಗೆ ಕಣ್ಣ ಮುಂದೆ ತೇಲಿ ಹೋಗುತ್ತದೆ. ಮನಸ್ಸು ಕಂಪಿಸುತ್ತದೆ, ಕಂಗಳು ಹನಿಸುತ್ತವೆ.


                                                                           --ಅರುಣ ಸಿರಿಗೆರೆ

9 comments:

ಜಗದೀಶ್ ನಾಗರಾಜು said...

ಹಾಯ್ ಅರುಣ, ನಿನ್ನ ಆಟೋಗ್ರಾಫ್ ತುಂಬಾ ಚೆನ್ನಾಗಿದೆ. ಇದು ರಿಯಲ್ ಸ್ಟೋರಿನಾ?

ಅವೀನ್ said...

ಅರುಣ್, ನನ್ನದೂ ಕೂಡ ಅದೇ ಪ್ರಶ್ನೆ...

ಇದು ನಿಮ್ಮ ಸ್ವಂತ ಅನುಭವವ? ಹಾಗಿದ್ದಲ್ಲಿ.. ನಿಮ್ಮ ಮರೆಯಾದ ಹುಡುಗಿಯನ್ನು ಮತ್ತೆ ಹುಡುಕುವ ಪ್ರಯತ್ನ ಮಾಡಲಿಲ್ಲವ? ಈಗ ಆಕೆ ಎಲ್ಲಿದ್ದರೆಂಬ Clue ಏನಾದ್ರೂ ಇದ್ದೀಯ? I am bit curious on this story. ದಯವಿಟ್ಟು ನನಗೆ Updates ಕೊಡಿ.

ನಿಮ್ಮ
ಅವೀನ್

ಅರುಣ ಸಿರಿಗೆರೆ said...

ಜಗದೀಶ್ ಮತ್ತು ಅವೀನ್..

ಇದು ಸಂಪೂರ್ಣ ನನ್ನ ಕಥೆಯಲ್ಲ, ನನ್ನ ನಿಜವಾದ ಆಟೋಗ್ರಾಫ್ ಪುಸ್ತಕದಲ್ಲಿ ಒಂದೇ ಒಂದು ಹಾಳೆ ಮಾತ್ರ ಖಾಲಿ ಉಳಿದಿದೆ ಮತ್ತು ಅದರಲ್ಲಿ ಒಬ್ಬಳು ಹುಡುಗಿ ಬರೆಯಬೇಕಿತ್ತು ಅನ್ನೋದು ಮಾತ್ರವೇ ನನ್ನ ಜೀವನಕ್ಕೂ ಈ ಕಥೆಗೂ ಇರುವ ಸಾಮ್ಯತೆ. ಹೊರತಾಗಿ ಇದು ಒಂದು ಕಾಲ್ಪನಿಕ ಕಥೆ. :)

ಕಥೆಯನ್ನು ಓದಿ ಆಸಕ್ತಿ ತೋರಿದ್ದಕ್ಕೆ ಧನ್ಯವಾದಗಳು. :)

Unknown said...

Arun nimma autograph nijavagalu tumba chennagide. nimma nija jeevanada aa khali haale tumbisuva hudugi bega nimage sigali antha aashisuve :)

Unknown said...
This comment has been removed by the author.
ಅರುಣ ಸಿರಿಗೆರೆ said...

Thank u Sujata :)

Seema said...

Aruna, Channagede :)

ದಿನಕರ ಮೊಗೇರ said...

tumbaa chennaagi barediddeeri...
saraLavaagi oDisikonDu hoyitu....

nimma Khali puTa tumbisalu aake matte barali....

SWAPNA said...

hmmm... tumba channagi barediddira.. i loved it :)