Tuesday 27 November 2012

ಸ್ವಪ್ನಗಳು
ಆಗಾಗ ಸವಿ ಸ್ವಪ್ನಗಳು, ಪ್ರೀತಿಯಾದಂತೆ..
ಪ್ರತಿದಿನ ಮುಂಜಾನೆ ನನ್ನವಳ
ತೋಳ ತೆಕ್ಕೆಯಲಿ ಕಣ್ತೆರೆದಂತೆ
ನನ್ನವಳ ಕೆನ್ನೆಗೆ ಮುತ್ತಿಡುವ 
ಬೆಳಕಿನ ಕಿರಣಗಳ ಓಡಿಸಲು
ಕಿಟಕಿಯ ಪರದೆಯ ಮುಚ್ಚಿದಂತೆ

ಆಗಾಗ ಸವಿ ಸ್ವಪ್ನಗಳು, ಪ್ರೀತಿಯಾದಂತೆ..
ಆ ಕ್ಯಾಡ್-ಬರೀಸ್ ಚೆಲುವೆಯಂತೆ
ನನ್ನಾಕೆ ಹಸಿ ಕೂದಲ ಹನಿಗಳನ್ನು ಕೊಡವಿ
ನನ್ನಲ್ಲಿರುವ ರಸಿಕನನ್ನು ಕೆಣಕಿದಂತೆ.
ನನ್ನಾಕೆಯ ಕೈಗೆ ಕೈ ಬೆಸೆದು
ಮುಸ್ಸಂಜೆಯ ಮರಳ ತೀರದಲಿ
ಮುಳುಗುವ ಸೂರ್ಯನ ದಿಟ್ಟಿಸಿದಂತೆ.

ಆಗಾಗ ಸವಿ ಸ್ವಪ್ನಗಳು, ಪ್ರೀತಿಯಾದಂತೆ..
ನಾನು ನನ್ನಾಕೆಯ ಮುಂಗುರಳ
ಜೊತೆ ಆಡುತ್ತಾ ದಿನ ಕಳೆದಂತೆ..
ನಾ ಅವಳ ಕೆನ್ನೆಗಳ ಮೇಲೆ
ಜಾರುವ ಇಬ್ಬನಿಯಾದಂತೆ
ಮತ್ತೆ ನಾನು ನನ್ನಾಕೆಯೆ
ಪ್ರೀತಿಯಲ್ಲಿ ಕರಗಿದಂತೆ.

ಈಗೀಗ ದುಸ್ವಪ್ನಗಳು ಮದುವೆಯಾದಂತೆ..
ನನ್ನಾಕೆ ನನ್ನನ್ನು ನಿದ್ರಾದೇವಿಯ 
ಮಡಿಲಿಂದ, ತಿವಿದು ಏಳಿಸಿದಂತೆ..
ಹಾಲು, ತರಕಾರಿ, ಸೊಪ್ಪು ತರಲು
ಮಾರ್ಕೆಟ್-ಗೆ ಅಟ್ಟಿದಂತೆ

ಈಗೀಗ ದುಸ್ವಪ್ನಗಳು ಮದುವೆಯಾದಂತೆ..
ನನ್ನಾಕೆಯ ಸೀರೆಗೆ ಮ್ಯಾಚಿಂಗ್
ಬ್ಲೌಸ್ ಹುಡುಕಾಡಿ ದಣಿದಂತೆ..
ನನ್ನಾಕೆಯ ದಾಹವನ್ನು ನೀಗಿಸದ 
ಬಂಗಾರ, ಬಳೆ, ಓಲೆಗಳನ್ನು 
ಅರಸುತ್ತ, ಅಲೆಮಾರಿಯಾದಂತೆ.

ಈಗೀಗ ಕೇವಲ ಸ್ವಪ್ನಗಳು..
ನನ್ನಾಕೆಯ ನಿರೀಕ್ಷೆಯ ಭಾರವನ್ನು
ಹೊರಲಾರದೆ ಕುಸಿದಂತೆ..
ನಾನು ನನ್ನಾಕೆಗೆ, ನನ್ನಾಕೆಯಿಂದ
ಸೋತಂತೆ.. ಸೋತು ಗೆದ್ದಂತೆ!!!

-- ಅರುಣ ಸಿರಿಗೆರೆ
Sunday 29 May 2011

ಏಕಾಂತ


ಏಕಾಂತವೆಂದರೆ
ಕೆಲವರಿಗೆ ಅಸಹನೆ
ಮತ್ತೆ ಹಲವರಿಗೆ ಭಯ
ನನಗೆ, ಅದೇ ಬಲು ಪ್ರಿಯ.
ನನ್ನೊಳಗಿರುವ ನನ್ನನ್ನು
ಹೆಕ್ಕಿ ತೆಗೆದು ಬೆಳಕಿಗಿಟ್ಟ
ಏಕಾಂತವೇ ನನ್ನ ನಿಜ ಗೆಳೆಯ.

ಏಕಾಂತವೆಂದರೆ ಒಂಟಿತನವಲ್ಲ
ಅದು ನನ್ನೊಳಗಿರುವ ನನಗೆ
ನಾ ಕೊಡಬೇಕಾದ ಸಮಯ.
ಅಪ್ಪ, ಅಮ್ಮ, ಅಣ್ಣ, ತಂಗಿ,
ಗೆಳೆಯ, ಗೆಳತಿ.... ಹೀಗೆ
ಎಲ್ಲರಿಗಾಗಿ ಸಮಯವಿದೆ.
ಹಾಗೆಯೇ..
ನನ್ನೊಳಗಿರುವ ನನ್ನೊಡನೆಯೂ
ನಾ ಕೊಂಚ ಸಮಯ ಕಳೆಯಬೇಕಿದೆ.

ನನ್ನನ್ನು ನಾನೇ ಹೊಗಳಿಕೊಳ್ಳಲು
ನನ್ನನ್ನು ನಾನು ತಿದ್ದಿಕೊಳ್ಳಲು
ಒಟ್ಟಿನಲ್ಲಿ ನನ್ನ ಉತ್ತಮಪಡಿಸಿಕೊಳ್ಳಲು
ನನ್ನೊಳಗಿರುವ ನನಗೆ ಸಮಯ ಇಡಬೇಕಿದೆ.
ನನ್ನನ್ನು ನಾನೇ ಅರಿಯಬೇಕಿದೆ.

ಏಕಾಂತದಲ್ಲೇ ಅಲ್ಲವೆ,
ಮನಸ್ಸು ಪೂರ್ಣ ತೆರೆದುಕೊಳ್ಳುವುದು
ಸಿಹಿ ನೆನಪುಗಳು ಮರುಕಳಿಸಿ
ಮೈ ಝುಮ್ಮೆನ್ನುವುದು
ಯಾತನೆಗಳ ನೆನೆದು
ಮತ್ತೆ ಮತ್ತೆ ಅಳಬೇಕೆನಿಸುವುದು.
ಹೀಗೆ, ಏಕಾಂತದಲ್ಲಷ್ಟೇ
ನನ್ನ ಮನಸ್ಸಿನಾಳಕ್ಕೆ ಇಳಿದು
ನನ್ನ ನಾ ಅರಿಯಬಹುದು.

ನೀವೂ ಏಕಾಂತದಲ್ಲೊಮ್ಮೆ ಮಿಂದು ನೋಡಿ.
ಏಕೆಂದರೆ, ಏಕಾಂತವೇ
ಮನಸ್ಸಿನ ಮುಖಕ್ಕೆ ನಿಜವಾದ ಕನ್ನಡಿ

Saturday 14 May 2011

ಹಳೆಯ ಚಿತ್ರಗೀತೆಗಳ ಸಾಹಿತ್ಯ.. ಒಂದು ಹಿನ್ನೋಟ


ಸಂಗೀತ, ಹಾಡುಗಳು ಅಂದ್ರೆ ಬಹುತೇಕ ಜನರಿಗೆ ಇಷ್ಟ. ನನಗೆ ಕೊಂಚ ಜಾಸ್ತಿನೇ ಇಷ್ಟ. ಸಾಧ್ಯ ಆದಾಗಲೆಲ್ಲಾ ಹಾಡು ಕೇಳೋದು ನನ್ನ ಛಟ. ವಿಶೇಷವಾಗಿ ಹಳೆಯ ಚಿತ್ರಗೀತೆಗಳು ಮತ್ತು ಭಾವಗೀತೆಗಳು ನನ್ನ ಮೆಚ್ಚಿನ ಆಯ್ಕೆ. ಎಂದಿನಂತೆ ಇಂದೂ ಕೂಡ, ಕೆಲಸ ಮುಗಿಸಿ ಕಛೇರಿಯಿಂದ ಮನೆಗೆ ಹೋಗ್ತಾ ಇದ್ದಾಗ, ಕಿವಿಗೆ ಹೆಡ್ ಫೋನ್ ಸಿಗಿಸಿ, ನನ್ನ ಮೊಬೈಲಿನಲ್ಲಿ ಇರುವ ಹಾಡುಗಳನ್ನ ಆಲಿಸಲು ಶುರುವಿಟ್ಟೆ. ಕೆಲವು ಹಾಡುಗಳ ನಂತರ, ಪುಟ್ಟಣ್ಣನವರ ನಿರ್ದೇಶನದ ’ಪಡುವರಳ್ಳಿ ಪಾಂಡವರು’ ಚಿತ್ರದಿಂದ ಎಸ್.ಪಿ.ಬಿ ಅವರು ಹಾಡಿರುವ ’ಜನುಮ ನೀಡಿದ ಭೂ ತಾಯಿಯ...’ ಶುರುವಾಯಿತು.

ಬಸ್ಸಿನ ಕಿಟಕಿಯ ಗಾಜಿಗೆ ತಲೆಯೊರಗಿಸಿ, ಹಾಡಿನ ಸಾಹಿತ್ಯದ ಕಡೆ ಗಮನ ಹರಿಸಿದೆ. ಪ್ರೊ. ದೊಡ್ಡರಂಗೇಗೌಡರು ಬರೆದಿರುವ ಹಾಡದು. ಕೇಳುತ್ತಾ ತುಂಬಾ ಭಾವುಕ ಆಗ್ಬಿಟ್ಟೆ ಅನ್ನಿಸ್ತು. ಅದು ಆ ಹಾಡಿನಲ್ಲಿದ್ದ ಸಂಗೀತ ಮತ್ತು ಸಾಹಿತ್ಯದ ಶಕ್ತಿ. ಇಂದಿನ ಚಿತ್ರ ಗೀತೆಗಳ ಸಾಹಿತ್ಯ, ಹೇಗೆ ನಮ್ಮ ಸಂಸ್ಕೃತಿಯನ್ನ ಕೊಲ್ಲುತ್ತಾ ಇದೆ, ಹೇಗೆ ಸಮಾಜದ ಸ್ವಾಸ್ಥ್ಯವನ್ನ ಹಾಳು ಮಾಡ್ತಾ ಇದೆ ಅಂತ ವಿವರಿಸಿ ಹೇಳೊ ಅವಶ್ಯಕತೆ ಇಲ್ಲ ಅನ್ಸುತ್ತೆ. ಈ ’ಜನುಮ ನೀಡಿದ ಭೂ ತಾಯಿಯ..’ ತರಹದ ಸಾಹಿತ್ಯ ಮತ್ತು ಪಡುವರಳ್ಳಿ ಪಾಂಡವರು ತರಹದ ಚಿತ್ರಗಳು, ನಮಗೆ ಇಂದು ಸಿಗ್ತಾ ಇಲ್ಲ ಅನ್ನೋದು ಕನ್ನಡಿಗರ ದೌರ್ಭಾಗ್ಯ. ಇದೆಲ್ಲಾ ನನ್ನ ತಲೆಯಲ್ಲಿ ಹಾಗೆ ಜಾರಿದಾಗ, ನನ್ನ ಮನಸ್ಸಿಗೆ ಹೊಳೆದಿದ್ದು ಈ ಹಾಡಿನ ಸಾಹಿತ್ಯವನ್ನ ನಿಮ್ಮೆಲ್ಲರ ಜೊತೆ ಹಂಚಿಕೋಬೇಕು ಅಂತ. ಇದರ ಜೊತೆಗೆ ಇನ್ನು ಬೇರೆ ಬೇರೆ ಅದ್ಭುತವಾದ ಸಾಹಿತ್ಯ ಇರುವ ಹಾಡುಗಳನ್ನು ಕೂಡ ನಿಮ್ಮ ಗಮನಕ್ಕೆ ಅಥವಾ ನಿಮಗೆ ಮತ್ತೆ ನೆನಪು ಮಾಡಿಕೊಡಬೇಕೆಂಬುದೇ ನನ್ನ ಬಯಕೆ. ದಯಮಾಡಿ ಎರಡು ನಿಮಿಷವನ್ನ ಈ ಹಾಡುಗಳ ಸಾಹಿತ್ಯವನ್ನ ಓದಲು ವ್ಯಯಿಸಿ.


ಜನ್ಮ ನೀಡಿದ ಭೂ ತಾಯಿಯ

ಚಿತ್ರ: ಪಡುವರಳ್ಳಿ ಪಾಂಡವರು
ನಿರ್ದೇಶನ: ಪುಟ್ಟಣ್ಣ ಕಣಗಾಲ್
ಸಂಗೀತ: ವಿಜಯ ಭಾಸ್ಕರ್
ಸಾಹಿತ್ಯ: ಪ್ರೊ. ದೊಡ್ಡರಂಗೇಗೌಡರು
ಗಾಯನ: ಎಸ್.ಪಿ. ಬಾಲಸುಬ್ರಮಣ್ಯಮ್

ಜನ್ಮ ನೀಡಿದ ಭೂ ತಾಯಿಯ
ನಾ ಹೇಗೆ ತಾನೆ ತೊರೆಯಲಿ?    |ಪ|
ಅನ್ನ ನೀಡಿದ ಈ ಮಣ್ಣನು
ನಾ ಹೇಗೆ ತಾನೆ ಮರೆಯಲಿ?

ಈ ಗಾಳಿ, ಈ ನೀರು ನನ್ನ ಒಡಲು
ಈ ಬೀದಿ, ಈ ಮನೆಯೆ ನನ್ನ ತೊಟ್ಟಿಲು,
ಈ ಮಾಚ, ಈ ಕೆಂಚ ಎಲ್ಲಾ ಹೆಸರು
ಎಂದೆಂದೂ ನನ್ನೆದೆಯ ಅಚ್ಚನೆಯ ಹಸಿರು  |ಪ|

ಈ ಗೌರಿ, ಈ ಗಂಗೆ ಹಾಲ ಕುಡಿದೆ
ಓಡೋಡಿ ನಲಿದೆ, ಊರೆಲ್ಲಾ ಕುಣಿದೆ
ಕಾಳವ್ವ, ಸುಬ್ಬವ್ವ ನನ್ನ ಎತ್ತಿ ಆಡಿ
ಹರಸಿದ ತಾಯಿಯರ ಹೇಗೆ ಮರೆಯಲಿ?   |ಪ|

ಈ ಜೀವ, ಈ ದೇಹ ಅರೆದು, ಅರೆದು
ಹೊಸ ಆಸೆ ಹೊಸ ಹಾದಿ ಕನಸೆಂದು ತಿಳಿದು
ಬಾನತ್ತ ಭುವಿಯತ್ತ ಹೆಚ್ಚಾಗಿ ನೋಡುವ
ಪಂಜರದ ಹಕ್ಕಿಗಳ ಹೇಗೆ ಮರೆಯಲಿ?

ಜನ್ಮ ನೀಡಿದ ಭೂ ತಾಯಿಯ
ನಾ ಹೇಗೆ ತಾನೆ ತೊರೆಯಲಿ?    |ಪ|
ಅನ್ನ ನೀಡಿದ ಈ ಮಣ್ಣನು
ನಾ ಹೇಗೆ ತಾನೆ ಮರೆಯಲಿ?

ಹಾಡನ್ನೊಮ್ಮೆ ಇಲ್ಲಿ ಕೇಳಿ.. 

Wednesday 28 April 2010

ಮೈ ಆಟೋಗ್ರಾಫ್


ಇಂದಾದರೂ ನನ್ನಲ್ಲಿರುವ ಅವಳ ಭಾವನೆಗಳಿಗೆ ಪದಗಳಾಗಬೇಕೆಂದು ನಿರ್ಧರಿಸಿ ಹೊರಟು ನಿಂತೆ. ಇದೇ ಕಡೆಯ ಅವಕಾಶ ಎಂದೆನಿಸಿತು. ಇಂದು ಪರೀಕ್ಷೆಯ ಕೊನೆಯ ದಿನ. ಅಷ್ಟು ವರ್ಷಗಳು ಒಂದೇ ತರಗತಿಯಲ್ಲಿದ್ದರೂ ಎಂದೂ ತುಟಿಬಿಚ್ಚಿ ಮಾತನಾಡಿರಲಿಲ್ಲ. ಆದರೆ ಕಣ್ಣುಗಳು ಅವಕಾಶ ಸಿಕ್ಕಾಗಲೆಲ್ಲ ಮಾತನಾಡಿಕೊಂಡಿದ್ದವು.

ಮರೆಯದೆ ಆಟೋಗ್ರಾಫ್ ಎತ್ತಿಕೊಂಡು ಸುಮಾರು ಮೂರು ತಿಂಗಳಿನಿಂದ ಖಾಲಿ ಇದ್ದ ಆ ಪುಟವನ್ನೊಮ್ಮೆ ದಿಟ್ಟಿಸಿದೆ, ಅವಳಿಗಾಗಿಯೇ ಮೀಸಲಿಟ್ಟ ಆ ಪುಟ, ಹಾಗೆ ಖಾಲಿಯಾಗಿಯೇ ಇತ್ತು. ಇಂದು ಅದನ್ನು ತುಂಬಿಸಿ ನನ್ನ ಮನವನ್ನೂ ತುಂಬಿಸಿಕೊಳ್ಳಬೇಕೆಂಬ ತವಕದಿಂದ ಕಾಲೇಜ್ ಕಡೆ ಹೆಜ್ಜೆ ಹಾಕಿದೆ.

ಕಾಲೇಜಿನಲ್ಲಿ ಎಲ್ಲರೂ ಪರೀಕ್ಷೆಗಾಗಿ ತಯಾರಿ ನಡೆಸಿದ್ದರೆ , ನಾನು ನನ್ನ ಆಟೋಗ್ರಾಫ್-ನ ಆ ಖಾಲಿ ಪುಟವನ್ನೇ ಭಾವುಕನಾಗಿ ನೋಡುತ್ತಾ ನಿಂತಿದ್ದೆ. ಅವಳಿಗೆ ಏನನ್ನು ಹೇಳಬೇಕು, ನನ್ನ ಭಾವಗಳಿಗೆ ಹೇಗೆ ಗೀತೆಯಾಗಬೇಕು ಎನ್ನುವುದಷ್ಟೇ ನನ್ನ ಮನಸಿನಲ್ಲಿತ್ತು, ಪರೀಕ್ಷೆ ಮರೆತು ಹೋಗಿತ್ತು. ಸೈರನ್ ಕೂಗು ಪರೀಕ್ಷೆಗೆ ಸಮಯವೆಂದು ನನ್ನ ಎಚ್ಚರಿಸಿತು.

ಹೇಗೋ ಕೊಸರಾಡಿ ಆ ಮೂರು ಗಂಟೆಗಳನ್ನು ಕಳೆದು, "ಪಾಸಾಗುವನೆಲ್ಲ!! ಅಷ್ಟೇ ಸಾಕು" ಎಂದು ನಿಟ್ಟುಸಿರು ಬಿಟ್ಟು ಪರೀಕ್ಷಾ ಕೊಠಡಿಯಿಂದ ಓಡೋಡಿ ಹೊರಬಂದೆ. ನನ್ನ ಕಣ್ಣುಗಳಿಗೆ ಬಿಡುವಿಲ್ಲದ ಕೆಲಸ. ಅವಳು ಯಾವ ಮೂಲೆಯಲ್ಲಿ ನಿಂತಿರುವಳೋ ಎಂದು ಹುಡುಕುತ್ತಲೇ ಇವೆ. ಹುಡುಕಾಟ ಸರಿಸುಮಾರು ಅರ್ಧಗಂಟೆ ಸಾಗಿತು. ಅಷ್ಟರಲ್ಲಾಗಲೇ ಗೆಳೆಯರೆಲ್ಲಾ ನನ್ನ ಸುತ್ತುವರೆದಿದ್ದರು. ಆ ಪ್ರಶ್ನೆಗೆ ಏನು ಉತ್ತರ? ಈ ಪ್ರಶ್ನೆಗೆ ಏನು? ಅದು ಸರಿ, ಇದು ತಪ್ಪು ಎಂಬ ತರ್ಕಗಳು ಸಾಗುತ್ತಿದ್ದರೆ ನನ್ನ ಕಣ್ಣುಗಳು ಅವಳ ಹುಡುಕಾಟದಲ್ಲಿದ್ದವು.

"ಅಗೋ ಅಲ್ಲಿ, ಅವಳ ಗೆಳತಿಯರೊಂದಿಗೆ" ಎಂದು ಎಚ್ಚರಿಸಿದವು ನನ್ನ ಕಣ್ಣುಗಳು. ತುಟಿಗಳು ತಾವಾಗಿ ಅರಳಿದವು. ಒಂದು ಬಗೆಯ ಉತ್ಸಾಹ. ಇನ್ನೇನು ಖಾಲಿಪುಟ ಮತ್ತು ಮನಸನ್ನು ತುಂಬಿಸಿಕೊಳ್ಳುವ ಸಮಯ ಬಂದೇಬಿಟ್ಟಿತು ಎಂದು ಮನಸ್ಸು ಕುಣಿಯಲಾರಂಭಿಸಿತು. ಹೇಗೋ ಗೆಳೆಯರ ಕಣ್ಣು ತಪ್ಪಿಸಿ ಅವಳೆಡೆಗೆ ಹೆಜ್ಜೆ ಹಾಕಿದೆ.

"ಹೇ ಪ್ರಶಾಂತ್!" ಹಿಂದಿನಿಂದ  ಯಾವುದೋ ದನಿ ನನ್ನ ತಡೆಯಿತು. ಮನದಲ್ಲೇ ಶಪಿಸಿ ಹಿಂತಿರುಗಿದೆ. ನನ್ನ ಆತ್ಮೀಯ ಗೆಳೆಯನೊಬ್ಬ ನಗುತ್ತಾ ನಿಂತಿದ್ದ. "ನಾಳೆ ನೀನು ಊರಿಗೆ ಹೋಗ್ತಾ ಇದಿಯ ಅಲ್ವ, ಅದಕ್ಕೆ ಅಮ್ಮ ನಿನ್ನ ಮನೆಗೆ ಕರೆದುಕೊಂದು ಬಾ ಅಂದಿದ್ದಾಳೆ. ನಡೆ ಹೋಗೋಣ" ಎಂದ. "ಇಲ್ಲ ಕಣೋ, ಸ್ವಲ್ಪ ಕೆಲಸ ಇದೆ, ಸಂಜೆ ಬರ್‍ತೀನಿ" ಎಂದು ತಡವರಿಸಿದೆ. "ಓಹೋ! ಅವಳನ್ನ ಮಾತನಾಡಿಸಬೇಕ? ಸರಿ, ಇಲ್ಲೆ ಕಾಯ್ತಾ ಇರ್‍ತೀನಿ, ನೀನು ಮುಗಿಸಿ ಬಾ" ಎಂದು ಅಲ್ಲೆ ಇದ್ದ ಕಲ್ಲು ಬೆಂಚಿಗೆ ಒರಗಿದ. ಅವನ ಕಡೆ ನಸುನಕ್ಕು, ತಿರುಗಿ ಅವಳತ್ತ ಕಣ್ಣು ಹಾಯಿಸಿದೆ. "ಅರೆ! ಕಣ್ಣುಗಳು ಮಂಜಾಗುತ್ತಿವೆಯೇ?" ಸ್ವಲ್ಪ ಹೊತ್ತಿನ ಕೆಳಗೆ ಇದ್ದವಳು ಈಗ ಅಲ್ಲಿಲ್ಲ. ಕೆಲಕ್ಷಣ ದಂಗಾಗಿ ನಿಂತೆ. ಬೇರೆ ಕಡೆ  ಇರಬಹುದೆಂದು ಕಣ್ಣುಗಳು ಹರಿದಾಡಲು ಆರಂಭಿಸಿದವು.

"ಅಗೋ ಅಲ್ಲಿ, ಕಾಲೇಜ್ ಗೇಟಿನ ಬಳಿ" ನೋಡು ನೋಡುತ್ತಿದ್ದಂತೆ ಅವಳ ಅಣ್ಣನ ಜೊತೆ ಬೈಕಿನಲ್ಲಿ ಕಣ್ಮರೆಯಾದಳು. ಮನಸ್ಸು ಅಲ್ಲೇ ಕುಸಿದು ಕೂತಿತ್ತು. ಕಡೆಯ ಅವಕಾಶ ಕೈಚೆಲ್ಲಿ  ಹೋಗಿತ್ತು.

ಇಲ್ಲಿಗೆ ಎಂಟು ವರ್ಷಗಳು ಕಳೆದವು. ಇಂಥಹದೊಂದು ಘಟನೆ ನನ್ನ ಮನಸಿನಲ್ಲಿ ಉಳಿಯುತ್ತದೆಂದು ಎಣಿಸಿರಲಿಲ್ಲ. ನನ್ನ ಕಾಲೇಜ್ ದಿನಗಳನ್ನು ಮೆಲುಕು ಹಾಕಲು ನನ್ನ ಆಟೋಗ್ರಾಫ್ ತೆಗೆದಾಗಲೆಲ್ಲ ಆ ಖಾಲಿ ಪುಟದ ಬಳಿ ನಿಂತು ಭಾವುಕನಾಗಿ ನೋಡುತ್ತಾ ಕೂತುಬಿಡುತ್ತೇನೆ. ಮೇಲಿನ ಘಟನೆ ಹಾಗೆ ಕಣ್ಣ ಮುಂದೆ ತೇಲಿ ಹೋಗುತ್ತದೆ. ಮನಸ್ಸು ಕಂಪಿಸುತ್ತದೆ, ಕಂಗಳು ಹನಿಸುತ್ತವೆ.


                                                                           --ಅರುಣ ಸಿರಿಗೆರೆ

Wednesday 16 April 2008

ಬದುಕು - ಬವಣೆ

ಹುಟ್ಟು ಸಾವುಗಳ ಮಧ್ಯೆ
ಏನೆಲ್ಲಾ ನೋಡುವೆವು
ನೋವು ನಲಿವು, ಅಸಹನೆ
ಅನ್ಯಾಯ, ಅಕ್ರಮ ವಂಚನೆ

ಅದೆಷ್ಟೋ ಸಹಿಸಲಾಗದ ಮುಖಗಳು
ಅವುಗಳೊಂದಿಗಿನ ಪ್ರತಿ ಕ್ಷಣಗಳು
ಕೆಲವೊಮ್ಮೆ ನಾವು ನಗಲಾರದೆ
ಕಳೆದುಬಿಡುತ್ತೇವೆ ವಾರ ತಿಂಗಳುಗಳು

ಬೆಳೆದಂತೆ ಜವಾಬ್ದಾರಿ, ಹೆಚ್ಚುವ ಆತಂಕಗಳು
ಪ್ರತಿದಿನವೂ ಹೊಸತು, ಹೊಸ ಸಂಬಂದಗಳು
ಎಲ್ಲವನ್ನೂ ನಿಭಾಯಿಸಬೇಕು, ನಿಲ್ಲದೆ ಮುಂದೆ ಸಾಗಬೇಕು

ಎಲ್ಲವೂ ಬೇಕು, ಸುಖಿಸಬೇಕು
ದುಡಿದೋ, ದುಡಿಯದೆಯೋ ಗಳಿಸಬೇಕು
ಬೇರೊಬ್ಬರ ತುಳಿದು, ತಲೆಯೆತ್ತಿ,
ಎದೆಯುಬ್ಬಿಸಿ ನಾವು ಬೀಗಬೇಕು.

ನಾನು ನನ್ನದೆನ್ನುವುದು ಅದೆಷ್ಟೋ
ಇನ್ನಿಲದಂತೆ ಕಿತ್ತಾಡಿ, ಗಳಿಸಿ ಕೂಡಿಟ್ಟಿದ್ದೇನೊ
ಹೀಗೊಮ್ಮೆ ಯೋಚಿಸಿದರೆ ಶೂನ್ಯ
ಮನದಲ್ಲಿ ಇಣುಕಿ ಕುಟುಕುವುದೊಂದೇ ಪ್ರಶ್ನೆ
ಏನಿದು ಜೀವನ, ಯಾತಕೀ ಬವಣೆ?

-- ಅರುಣ ಸಿರಿಗೆರೆ